0.jpg1.jpg10.jpg11.jpg12.jpg2.jpg3.jpg4.jpg5.jpg6.jpg7.jpg8.jpg9.jpg
   
ಓದುಗರೇ....
 
'ಕರಾವಳಿ ಮುಂಜಾವು' ಓದುಗರೇ ರೂಪಿಸಿರುವ ಹೆಮ್ಮೆಯ ದಿನ ಪತ್ರಿಕೆ. ಕಳೆದ 21 ವರ್ಷಗಳಿಂದ ಜಿಲ್ಲೆಯ ನೆಲವಲ್ಲದೆ ಹೊರಗಿನ ರಾಜ್ಯದಲ್ಲೂ ಪ್ರಸರಣ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಏಕೈಕ ಪತ್ರಿಕೆಯಾಗಿದೆ.
ಕರಾವಳಿ ಮುಂಜಾವು ಈವರೆಗೆ ಮುದ್ರಣ ಮಾಧ್ಯಮದಲ್ಲಿ ತನ್ನ ಸಾಧನೆಯ ಹೆಜ್ಜೆಯಿಡುತ್ತಾ ಈಗ ವೆಬ್ ಸೈಟ್‍ನಮೂಲಕ ಇಂಟರ್‍ನೆಟ್‍ ಜಗತ್ತಿಗೆ ಪಾದಾರ್ಪಣೆ ಮಾಡಿದೆ.
1993 ಸೆಪ್ಟೆಂಬರ್‍ನಲ್ಲಿ ಜಿಲ್ಲಾಕೇಂದ್ರ ಕಾರವಾರದ ನೆಲದಲ್ಲಿ ಪುಟ್ಟ ಹೆಜ್ಜೆಯಿಟ್ಟ ಮುಂಜಾವು ಜಿಲ್ಲೆಯ ಅತ್ಯಧಿಕ ಪ್ರಸರಣ ಹೊಂದಿರುವ ಏಕೈಕ ಪತ್ರಿಕೆಯಾಗಿ ಬೆಳೆದು ನಿಂತಿದೆ. ದಿನಂಪ್ರತಿ ಎಂಟು ಪುಟಗಳೊಂದಿಗೆ ಜಿಲ್ಲೆಯ ಜನಮಿಡಿತದ ಸುದ್ದಿಗಳು ಪ್ರಕಟವಾಗುತ್ತಿರುವುದೇ ಓದುಗರ ನೆಚ್ಚಿನ ಪತ್ರಿಕೆಯಾಗಿ ಬೆಳೆಯಲು ಕಾರಣ. ಹೆಚ್ಚಿನ ಓದುಗರಿಗೆ ಪ್ರತಿದಿನದ ಆರಂಭವೇ ಕರಾವಳಿ ಮುಂಜಾವು ಪತ್ರಿಕೆ ಓದಿನಿಂದ ಎಂಬುದು ವಾಸ್ತವವಾಗಿದೆ. ಬೆಳಗಿನ ಚಹಾಕ್ಕಿಂತ ಮೊದಲೇ ಮುಂಜಾವು ಪತ್ರಿಕೆ ಮನಸ್ಸೆಳೆಯುತ್ತಿರುವುದರ ಅಸಲಿ ಸಂಗತಿಯೇನೆಂದರೆ ಸುದ್ದಿಯ ತಾಜಾತನ. ಅಂಗ ಸಂಸ್ಥೆ ಉದಯಪ್ರಭಾ ಪ್ರಕಾಶನದಡಿಯಲ್ಲಿ ಕರಾವಳಿ ಮುಂಜಾವು ಪತ್ರಿಕೆ ಪ್ರಕಟ ವಾಗುತ್ತಿದೆ.
ಪತ್ರಿಕೆಯ ಮುಡಿಗೇರಿದ ರಾಜ್ಯಮಟ್ಟದ ಪ್ರಶಸ್ತಿ
 
ಕರಾವಳಿ ಮುಂಜಾವು ಪತ್ರಿಕೆ ಜನಮಾನಸ ಪತ್ರಿಕೆಯಾಗಿ ಹೊರಹೊಮ್ಮಿದ್ದನ್ನು ಗಮನಿಸಿದ ಕರ್ನಾಟಕ ಪತ್ರಿಕಾ ಅಕಾಡೆಮಿ ರಾಜ್ಯದ ಅತ್ಯುತ್ತಮ ಗ್ರಾಮೀಣ ಪತ್ರಿಕೆಗೆ ಕೊಡುವ ಆಂದೋಲನ ಪ್ರಶಸ್ತಿಯನ್ನು 2006 ರಲ್ಲಿ ಪತ್ರಿಕೆಯ ಮುಡಿಗೇರಿಸಿದೆ. ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಗಂಗಾಧರ ಹಿರೇಗುತ್ತಿಯವರು ಆಗಿನ ಮುಖ್ಯಮಂತ್ರಿ ಧರಮ್‍ಸಿಂಗ್‍ರವರಿಂದ ಪ್ರಶಸ್ತಿ ಸ್ವೀಕರಿಸಿದ್ದರು.
ಭಾಷೆ-ಬಾಂಧವ್ಯಕ್ಕೆ ಕೊಂಡಿ
 
ಪತ್ರಿಕೆಯೊಂದು ನಾಡು-ಗಡಿ-ಭಾಷೆಗೆ ತನ್ನದೇ ಮಹತ್ವ ನೀಡುವ ಮೂಲಕ ತಾನು ಹುಟ್ಟಿದ ನೆಲಕ್ಕೆ ಅಪೂರ್ವ ಕೊಡುಗೆ ನೀಡುತ್ತಿರುವುದಕ್ಕೆ ಕರಾವಳಿ ಮುಂಜಾವು ನಿದರ್ಶನವಾಗಿದೆ. ಗೋವಾ ಗಡಿಯಲ್ಲಿರುವ, ಹೆಚ್ಚು ಕೊಂಕಣಿ ಹಾಗೂ ಮರಾಠಿ ಭಾಷಿಕರಿರುವ ಕಾರವಾರ, ಜೊಯಿಡ ಮತ್ತು ಹಳಿಯಾಳದಲ್ಲಿ ಭಾಷೆ-ಬಾಂಧವ್ಯಕ್ಕೆ ಕೊಂಡಿಯಾಗುವ ಮೂಲಕ ಕೊಂಕಣಿ ಮರಾಠಿ ಭಾಷಿಕರಲ್ಲಿ ಕನ್ನಡದ ಕಂಪನ್ನು ಹರಿಸಿದೆ. ಗಡಿಭಾಗದಲ್ಲಿ ಕರಾವಳಿ ಮುಂಜಾವು ಪತ್ರಿಕೆಯೆಂದರೆ ನೆಚ್ಚಿನಿಂದಲೇ ಒಪ್ಪಿಕೊಳ್ಳುವ ಓದುಗರ ಸಂಖ್ಯೆ ಹೆಚ್ಚಿದೆ. ಸಮಾಜದ ಎಲ್ಲ ಸ್ತರದ ಜನರ ದನಿಯಾಗಿ, ವ್ಯವಸ್ಥೆಯ ಕೊರತೆಯನ್ನು ನೇರ, ದಿಟ್ಟ ನುಡಿಗಳಲ್ಲಿ ಕಂಡದ್ದು ಕಂಡಹಾಗೆ ಪ್ರಕಟಿಸುವ ಪತ್ರಿಕೆ ಎನ್ನುವ ಕಾರಣಕ್ಕಾಗಿ ಕರಾವಳಿ ಮುಂಜಾವು ಜಿಲ್ಲೆಯ ಓದುಗರ ಮನಕ್ಕೊಪ್ಪಿದೆ. ಈಗ ವೆಬ್‍ಸೈಟಿನ ಮೂಲಕ ಜಗತ್ತಿನ ಮೂಲೆ ಮೂಲೆಯಲ್ಲೂ ತನ್ನ ಛಾಪನ್ನು ಮೂಡಿಸುವ ಭರವಸೆಯನ್ನು ಹೊಂದಿದೆ.
ಕರಾವಳಿ ಮುಂಜಾವು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಕಿರು ಪ್ರಬಂಧವನ್ನು ನಮ್ಮ ಪತ್ರಿಕೆಯ ಮೇಲೆ ಮಂಡಿಸಿರುವುದು ವಿಶೇಷ.
ನಾಡಿನ ಎಲ್ಲೆ ಮೀರಿ...... ಎಲ್ಲೆಲ್ಲೂ ಪ್ರಸಾರ
 
ಉತ್ತರ ಕನ್ನಡ ಜಿಲ್ಲೆಯ ಹನ್ನೊಂದು ತಾಲೂಕು ಮತ್ತು ಗಡಿ ಭಾಗದ ಗೋವಾದಲ್ಲಿ ಅದರಲ್ಲೂ ದಕ್ಷಿಣ ಗೋವಾದವರೆಗೆ ಕರಾವಳಿ ಮುಂಜಾವು ಪ್ರಸರಣ ಹೊಂದಿದೆ. ತಾಲೂಕು ಕೇಂದ್ರಗಳಿಂದ ಗ್ರಾಮಾಂತರ ಭಾಗದವರೆಗೂ ನಮ್ಮ ಪತ್ರಿಕೆ ನಿತ್ಯ ಓದುಗರ ಪಾಲಿಗೆ ಶುಭೋದಯದಂತಾಗಿದೆ. ಅತಿ ಹೆಚ್ಚು ಪ್ರಸರಣ ಸಂಖ್ಯೆ ಹೊಂದಿರುವ ಕರಾವಳಿ ಮುಂಜಾವು ಜಿಲ್ಲೆಯ ಪತ್ರಿಕೆಗಳಿಗೆ ಹೋಲಿಸಿದರೆ  ಒಂದು ಹೆಜ್ಜೆ ಮುಂದಿದೆ ಹಾಗೂ ಪ್ರಸರಣ ಸಂಖ್ಯೆ ಏರಿಕೆ ಯಾಗುತ್ತಲೇ ಇದೆ. ಜಿಲ್ಲೆಯ ಹೊರಗೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮುಂಬೈ, ಧಾರವಾಡ, ಬೆಳಗಾವಿ, ಶಿವಮೊಗ್ಗ ಮತ್ತಿತರ ನಗರಕ್ಕೆ ಸಾವಿರಾರು ಪತ್ರಿಕೆಗಳು ಅಂಚೆ ಮೂಲಕ ರವಾನೆ ಯಾಗುತ್ತದೆ. ಜಿಲ್ಲೆಯ ಮೂಲದವರು, ಸರಕಾರಿ ಉದ್ಯೋಗಿಗಳು, ಉದ್ಯಮಿಗಳು ಮತ್ತು ಸಾಹಿತಿಗಳು, ಕಲಾವಿದರು ಮತ್ತು ಪ್ರಜ್ಞಾವಂತರು ಕರಾವಳಿ ಮುಂಜಾವು ಪತ್ರಿಕೆಯನ್ನು ತಮ್ಮ ಮನೆಗೆ ತರಿಸಿಕೊಂಡು ಓದುತ್ತಿರುವದು ವಿಶೇಷ. ನಾಡಿನ ನಾಮಾಂಕಿತರಾಗಿರುವ ನಾಗತಿಹಳ್ಳಿ ಚಂದ್ರಶೇಖರ್, ಸಿದ್ದಲಿಂಗ ಪಟ್ಟಣಶೆಟ್ಟಿ, ರಂಜಾನ್ ದರ್ಗಾ, ಶಶಿಧರ ಭಟ್, ಜಯಂತ್ ಕಾಯ್ಕಿಣಿ, ಸುರೇಶ ಹೆಬ್ಳಿಕರ್, ಚಂದ್ರಶೇಖರ್ ಪಾಟೀಲ್ ಸೇರಿದಂತೆ ವಿವಿಧ ಕ್ಷೇತ್ರದ ಅನೇಕ ಸಾಧಕರು ಮುಂಜಾವು ಪತ್ರಿಕೆಯ ಓದುಗರು ಎನ್ನುವುದೇ ಹೆಮ್ಮೆಯ ವಿಷಯವಾಗಿದೆ. ಈಗ ವೆಬ್‍ಸೈಟ್‍ನ ಮೂಲಕ ಮತ್ತಷ್ಟು ಓದುಗರು ಪತ್ರಿಕೆಗೆ ಹತ್ತಿರವಾಗಲಿದ್ದಾರೆ.
 
   

Search  

   
© Karavali Munjavu